‘‘ಇವೆಲ್ಲಾ ಕೇವಲ ವಿಕೃತ ಕನಸುಗಳು. ನಿಜವಾಗಿ ಇವುಗಳನ್ನೆಲ್ಲಾ ಸ್ವತಃ ಅವನೇ ರಚಿಸಿ ತರುತ್ತಾನೆ. ಅವನು ಕವಿಯಾಗಿದ್ದಾನೆ. ಗತಕಾಲದಲ್ಲಿ ಕಳಿಸಲ್ಪಟ್ಟವರು (ದೂತರು) ತಂದಂತೆ ಅವನು ಏನಾದರೂ ಪುರಾವೆಯನ್ನು ತರಲಿ’’ ಎಂದು ಅವರು ಹೇಳುತ್ತಾರೆ
(ದೂತರೇ,) ನಿಮಗಿಂತ ಮುಂಚೆಯೂ ನಾವು (ದೂತರಾಗಿ) ಮಾನವರನ್ನು ಮಾತ್ರ ಕಳುಹಿಸಿದ್ದೆವು. ನಾವು ಅವರಿಗೆ ದಿವ್ಯವಾಣಿಯನ್ನು ತಲುಪಿಸಿದ್ದೆವು. (ಜನರೇ) ನಿಮಗೆ ತಿಳಿದಿಲ್ಲವಾದರೆ ಬಲ್ಲವರೊಡನೆ ಕೇಳಿರಿ
ನಾವು ಸತ್ಯವನ್ನು ಮಿಥ್ಯದ ಮೇಲೆ ಅಪ್ಪಳಿಸಿದಾಗ ಅದು (ಸತ್ಯವು) ಅದನ್ನು (ಮಿಥ್ಯವನ್ನು) ಹೊಸಕಿ ಹಾಕುತ್ತದೆ ಮತ್ತು ಅದು (ಮಿಥ್ಯವು) ನುಚ್ಚು ನೂರಾಗಿ ಬಿಡುತ್ತದೆ. ನೀವು ರಚಿಸಿಕೊಂಡವುಗಳಿಂದಾಗಿ (ನಿಮ್ಮ ಮಿಥ್ಯ ನಂಬಿಕೆಗಳಿಂದಾಗಿ) ನಿಮಗೆ ವಿನಾಶ ಕಾದಿದೆ
ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಪ್ರತಿಯೊಬ್ಬರೂ ಅವನಿಗೇ ಸೇರಿರುವರು. ಇನ್ನು, ಅವನ ಬಳಿ ಇರುವವರಂತು, ಅವನನ್ನು ಆರಾಧಿಸುವ ವಿಷಯದಲ್ಲಿ ಅಹಂಕಾರ ತೋರುವುದಿಲ್ಲ ಮತ್ತು ಅವರು ದಣಿಯುವುದೂ ಇಲ್ಲ
ಒಂದು ವೇಳೆ ಅವುಗಳಲ್ಲಿ (ಭೂಮಿ – ಆಕಾಶಗಳಲ್ಲಿ) ಅಲ್ಲಾಹನ ಹೊರತು ಬೇರೆ ದೇವರುಗಳು ಇದ್ದಿದ್ದರೆ ಅವೆರಡೂ ಅಸ್ತವ್ಯಸ್ತವಾಗಿ ಬಿಡುತ್ತಿದ್ದವು. ವಿಶ್ವಸಿಂಹಾಸನದ ಒಡೆಯನಾದ ಅಲ್ಲಾಹನು, ಅವರು ಹೊರಿಸುವ ಎಲ್ಲ ಆರೋಪಗಳಿಂದ ಸಂಪೂರ್ಣ ಮುಕ್ತನು
ಅವರೇನು, ಅವನ (ಅಲ್ಲಾಹನ) ಹೊರತು ಇತರರನ್ನು ದೇವರಾಗಿಸಿಕೊಂಡಿರುವರೇ? ಹೇಳಿರಿ; ನೀವು ನಿಮ್ಮ ಪುರಾವೆಯನ್ನು ತನ್ನಿರಿ. ಇದು (ಕುರ್ಆನ್) ನನ್ನ ಬಳಿ ಇರುವ ಉಪದೇಶವೂ ಇದುವೇ ಮತ್ತು ನನ್ನ ಹಿಂದಿನವರ ಬಳಿ ಇದ್ದ ಉಪದೇಶವೂ ಇದುವೇ. ಆದರೆ ಅವರಲ್ಲಿ ಹೆಚ್ಚಿನವರು ಸತ್ಯವನ್ನು ಬಲ್ಲವರಲ್ಲ. ಆದ್ದರಿಂದಲೇ ಅವರು ಮುಖ ತಿರುಗಿಸಿಕೊಂಡಿದ್ದಾರೆ
ಅವನಂತು ಅವರ ಮುಂದಿರುವ ಹಾಗೂ ಹಿಂದಿರುವ ಎಲ್ಲವನ್ನೂ ಬಲ್ಲನು. ಅವನು (ಅಲ್ಲಾಹನು) ಮೆಚ್ಚುವವರ ಹೊರತು ಬೇರೆ ಯಾರ ಪರವಾಗಿಯೂ ಅವರು ಶಿಫಾರಸು ಮಾಡಲಾರರು. ಸ್ವತಃ ಅವರೇ ಅವನ ಭಯದಿಂದ ನಡುಗುತ್ತಿರುವರು
ಧಿಕ್ಕಾರಿಗಳು ಅರಿತಿಲ್ಲವೇ, ಆಕಾಶಗಳು ಮತ್ತು ಭೂಮಿ ಕೂಡಿಕೊಂಡಿದ್ದವು. ಕೊನೆಗೆ ನಾವು ಅವೆರಡನ್ನೂ ಬೇರ್ಪಡಿಸಿದೆವು. ಇನ್ನು ಪ್ರತಿಯೊಂದು ಜೀವಂತ ವಸ್ತುವನ್ನೂ ನಾವು ನೀರಿನಿಂದ ಸೃಷ್ಟಿಸಿರುವೆವು. ಅವರೇನು ನಂಬುವುದಿಲ್ಲವೇ
ಪ್ರತಿಯೊಂದು ಜೀವವೂ ಮರಣದ ರುಚಿಯನ್ನು ಸವಿಯಲೇಬೇಕು. ಇನ್ನು ನಾವು ಕೆಡುಕುಗಳ ಮತ್ತು ಒಳಿತುಗಳ ಮೂಲಕ ನಿಮ್ಮನ್ನು ಪರೀಕ್ಷೆಗೆ ಒಳಪಡಿಸುತ್ತಲೇ ಇರುವೆವು. ಕೊನೆಗಂತು ನೀವು ನಮ್ಮ ಕಡೆಗೇ ಮರಳಿ ಬರುವಿರಿ
(ದೂತರೇ,) ಧಿಕ್ಕಾರಿಗಳು ನಿಮ್ಮನ್ನು ಕಂಡಾಗಲೆಲ್ಲಾ ನಿಮ್ಮನ್ನು ಕೇವಲ ತಮಾಷೆಯಾಗಿ ಪರಿಗಣಿಸುತ್ತಾರೆ. ಮತ್ತು ‘‘ನಿಮ್ಮ ದೇವರುಗಳ ಕುರಿತು ಮಾತನಾಡುತ್ತಿದ್ದವನು ಇವನೇ ತಾನೇ?’’ ಎನ್ನುತ್ತಾರೆ. ನಿಜವಾಗಿ ಅವರು ಆ ಪರಮ ದಯಾಮಯನ ಪ್ರಸ್ತಾಪವನ್ನೇ ಧಿಕ್ಕರಿಸುತ್ತಾರೆ
ಆ ಸಮಯದ ಕುರಿತು ಧಿಕ್ಕಾರಿಗಳು ಅರಿತಿದ್ದರೆ ಎಷ್ಟು ಚೆನ್ನಾಗಿತ್ತು. ಅಂದು ತಮ್ಮ ಮುಖಗಳನ್ನಾಗಲಿ ಬೆನ್ನುಗಳನ್ನಾಗಲಿ ಬೆಂಕಿಯಿಂದ ರಕ್ಷಿಸಿಕೊಳ್ಳಲು ಅವರಿಗೆ ಸಾಧ್ಯವಾಗದು ಮತ್ತು ಅವರಿಗೆ ಯಾವುದೇ ಸಹಾಯವೂ ಸಿಗದು
ಅವರನ್ನು ರಕ್ಷಿಸಲು ಅವರ ಬಳಿ ನಾವಲ್ಲದೆ ಬೇರೆ ದೇವರುಗಳಿದ್ದಾರೆಯೇ? ನಿಜವಾಗಿ ಅವರು (ಆ ದೇವರುಗಳು), ಸ್ವತಃ ತಮ್ಮ ನೆರವಿಗೂ ಅಶಕ್ತರಾಗಿದ್ದಾರೆ ಮತ್ತು ನಮಗೆದುರಾಗಿ ಅವರಿಗೆ ನೆರವಾಗಲು ಯಾರಿಗೂ ಸಾಧ್ಯವಿಲ್ಲ
ನಾವು ಅವರಿಗೂ ಅವರ ಪೂರ್ವಜರಿಗೂ ಧಾರಾಳ ಸಂಪತ್ತನ್ನು ದಯಪಾಲಿಸಿದ್ದೆವು. ಅವರು ಬಹುಕಾಲ ಅದೇ (ಸಂಪನ್ನ) ಸ್ಥಿತಿಯಲ್ಲಿದ್ದರು. ನಾವು (ಅವರ ಪಾಲಿಗೆ) ಭೂಮಿಯನ್ನು ಅದರ ಎಲ್ಲ ಮೂಲೆಗಳಿಂದಲೂ ಸಂಕುಚಿತಗೊಳಿಸುತ್ತಿರುವುದನ್ನು ಅವರು ಕಾಣುತ್ತಿಲ್ಲವೇ? ಅವರೇನು ವಿಜಯಿಗಳಾಗಬಲ್ಲರೇ
ಪುನರುತ್ಥಾನ ದಿನ ನಾವು ನ್ಯಾಯದ ತಕ್ಕಡಿಯನ್ನು ಸ್ಥಾಪಿಸುವೆವು. (ಅಂದು) ಯಾರ ಮೇಲೂ ಕಿಂಚಿತ್ತೂ ಅಕ್ರಮ ನಡೆಯದು. (ಕರ್ಮವು) ಕೇವಲ ಒಂದು ಸಾಸಿವೆ ಕಾಳಿನಷ್ಟಿದ್ದರೂ ನಾವು ಅದನ್ನು ಮುಂದೆ ತರುವೆವು. ವಿಚಾರಣೆಗೆ ನಾವೇ ಸಾಕು
ನಾವು ಮೂಸಾ ಮತ್ತು ಹಾರೂನರಿಗೆ ಅಲ್ಫುರ್ಕಾನ್ ಅನ್ನು (ಸತ್ಯ – ಮಿಥ್ಯಗಳನ್ನು ಪ್ರತ್ಯೇಕಿಸಿ ತಿಳಿಸುವ ಗ್ರಂಥವನ್ನು) ಮತ್ತು ಸತ್ಯನಿಷ್ಠರ ಪಾಲಿಗೆ ಜ್ಯೋತಿ ಹಾಗೂ ಉಪದೇಶವನ್ನು ನೀಡಿದೆವು
ನಾವು ಅವರನ್ನು, ನಮ್ಮ ಆದೇಶ ಪ್ರಕಾರ ಜನರಿಗೆ ಮಾರ್ಗದರ್ಶನ ನೀಡುವ ನಾಯಕರಾಗಿ ಮಾಡಿದೆವು ಮತ್ತು ನಾವು ಅವರಿಗೆ, ಸತ್ಕರ್ಮಗಳನ್ನು ತಿಳಿಸುವ ಮತ್ತು ನಮಾಝನ್ನು ಪಾಲಿಸಬೇಕು ಹಾಗೂ ಝಕಾತನ್ನು ಪಾವತಿಸಬೇಕೆನ್ನುವ ದಿವ್ಯವಾಣಿಯನ್ನು ಕಳಿಸಿದ್ದೆವು. ಅವರು ನಮ್ಮನ್ನೇ ಆರಾಧಿಸುವವರಾಗಿದ್ದರು
ಇನ್ನು ಲೂತ್ರಿಗೆ ನಾವು ಅಧಿಕಾರವನ್ನೂ ಜ್ಞಾನವನ್ನೂ ನೀಡಿದ್ದೆವು ಮತ್ತು ತೀರಾ ಅಶ್ಲೀಲ ಕೃತ್ಯಗಳನ್ನು ಎಸಗುತ್ತಿದ್ದವರ ನಾಡಿನಿಂದ ನಾವು ಅವರನ್ನು ರಕ್ಷಿಸಿದೆವು. ಖಂಡಿತವಾಗಿಯೂ ಅದು ಒಂದು ದುಷ್ಟ ಜನಾಂಗವಾಗಿತ್ತು
ಇನ್ನು, ದಾವೂದ್ ಮತ್ತು ಸುಲೈಮಾನರು. ಅವರಿಬ್ಬರೂ ಒಂದು ಹೊಲದ ಕುರಿತು ತೀರ್ಪು ನೀಡಲು ಹೊರಟಿದ್ದರು. ರಾತ್ರಿಯ ವೇಳೆ ಕೆಲವರ ಆಡುಗಳು ಅಲ್ಲಿ (ಆ ಹೊಲದಲ್ಲಿ) ಮೆದ್ದಿದ್ದವು ಮತ್ತು ಅವರ ತೀರ್ಪಿಗೆ ನಾವು ಸಾಕ್ಷಿಗಳಾಗಿದ್ದೆವು
ನಾವು ಸುಲೈಮಾನರಿಗೆ ಅದರ ವಾಸ್ತವವನ್ನು ಸೂಚಿಸಿದೆವು ಮತ್ತು ನಾವು ಅವರಿಬ್ಬರಿಗೂ ಜಾಣ್ಮೆಯನ್ನು ಹಾಗೂ ಜ್ಞಾನವನ್ನು ನೀಡಿದ್ದೆವು ಮತ್ತು ನಾವು ದಾವೂದರ ಜೊತೆ (ನಮ್ಮ) ಪಾವಿತ್ರವನ್ನು ಜಪಿಸುವಂತೆ ಪರ್ವತಗಳನ್ನು ಹಾಗೂ ಪಕ್ಷಿಗಳನ್ನು ಅವರಿಗೆ ಅಧೀನಗೊಳಿಸಿದ್ದೆವು. ಇದನ್ನೆಲ್ಲಾ ನಾವೇ ಮಾಡಿದ್ದೆವು
ಮತ್ತು ನಾವು ಬಿರುಗಾಳಿಯನ್ನು ಸುಲೈಮಾನರಿಗೆ ಅಧೀನಗೊಳಿಸಿದೆವು. ಅದು ಅವರ ಆದೇಶದಂತೆ, ನಾವು ಸಮೃದ್ಧಿಯನ್ನಿಟ್ಟಿರುವ ನೆಲದೆಡೆಗೆ ಚಲಿಸುತ್ತಿತ್ತು. ನಾವಂತು ಎಲ್ಲವನ್ನೂ ಬಲ್ಲವರಾಗಿದ್ದೇವೆ
ಕೊನೆಗೆ ನಾವು ಅವರಿಗೆ ಉತ್ತರ ನೀಡಿದೆವು, ಅವರ ಸಂಕಷ್ಟವನ್ನು ನಿವಾರಿಸಿದೆವು. ಮತ್ತು ನಾವು ಅವರಿಗೂ ಅವರ ಮನೆಯವರಿಗೂ, ಅವರ ಜೊತೆಗಿದ್ದ ಅವರಂತಹ ಇತರರಿಗೂ ನಮ್ಮ ಕಡೆಯಿಂದ ವಿಶೇಷ ಅನುಗ್ರಹವನ್ನು ಹಾಗೂ ಭಕ್ತರಿಗಾಗಿ ಉಪದೇಶವನ್ನು ಕರುಣಿಸಿದೆವು
ಇನ್ನು ಮೀನಿನವರು (ಯೂನುಸ್), ತಾನು ಕೋಪಗೊಂಡು ಹೊರಟು ಬಿಟ್ಟಾಗ, ನಾವು ಅವರನ್ನು ಹಿಡಿಯಲಾರೆವೆಂದು ಭಾವಿಸಿದ್ದರು. ಕೊನೆಗೆ ಅವರು ಕತ್ತಲುಗಳೊಳಗಿಂದ, ‘‘(ಓ ಅಲ್ಲಾಹ್) ನಿನ್ನ ಹೊರತು ಬೇರೆ ದೇವರಿಲ್ಲ. ನೀನು ಪರಮ ಪಾವನನು. ಖಂಡಿತವಾಗಿಯೂ ನಾನೇ ಅಕ್ರಮಿಯಾಗಿದ್ದೆ’’ ಎಂದು ಮೊರೆ ಇಟ್ಟಿದ್ದರು
ನಾವು ಅವರಿಗೆ ಉತ್ತರ ನೀಡಿದೆವು ಮತ್ತು ನಾವು ಅವರಿಗೆ ಯಹ್ಯಾರನ್ನು ದಯಪಾಲಿಸಿದೆವು ಹಾಗೂ ಅವರಿಗಾಗಿ ಅವರ ಪತ್ನಿಯನ್ನು ಗುಣಪಡಿಸಿದೆವು. ಅವರೆಲ್ಲಾ ಸತ್ಕಾರ್ಯಗಳಲ್ಲಿ ಸ್ಪರ್ಧಾತ್ಮಕವಾಗಿ ಭಾಗವಹಿಸುವವರು ಮತ್ತು ನಿರೀಕ್ಷೆಯೊಂದಿಗೂ ಭಯದೊಂದಿಗೂ ನಮ್ಮನ್ನು ಪ್ರಾರ್ಥಿಸುವವರಾಗಿದ್ದರು. ಅವರು ನಮ್ಮೆದುರು ತುಂಬಾ ವಿನಯಶೀಲರಾಗಿದ್ದರು
ಖಚಿತ ವಾಗ್ದಾನದ ಸಮಯವು (ಪುನರುತ್ಥಾನ ದಿನವು) ಹತ್ತಿರ ಬಂದಾಗ, ಧಿಕ್ಕಾರಿಗಳ ಕಣ್ಣುಗಳು ದಿಗ್ಭ್ರಮೆಗೊಳ್ಳುವವು. ‘‘ಅಯ್ಯೋ ನಮ್ಮ ದುಸ್ಥಿತಿ! ಈ ಕುರಿತು ನಾವು ನಿರ್ಲಕ್ಷದಲ್ಲಿದ್ದೆವು. ನಿಜಕ್ಕೂ ನಾವು ಅಕ್ರಮಿಗಳಾಗಿದ್ದೆವು’’ (ಎಂದು ಅವರು ಹೇಳುವರು)
ಅಂದು ನಾವು ಕಾಗದದ ಪುಟಗಳನ್ನು ಮಡಚಿದಂತೆ ಆಕಾಶವನ್ನು ಮಡಚಿ ಬಿಡುವೆವು. ನಾವು ಪ್ರಥಮ ಬಾರಿ ಸೃಷ್ಟಿಸಿದಂತೆಯೇ ಆ (ಸೃಷ್ಟಿ) ಕಾರ್ಯವನ್ನು ಪುನರಾವರ್ತಿಸುವೆವು. ಇದು ನಮ್ಮ ಕರ್ತವ್ಯವಾಗಿರುವ ವಾಗ್ದಾನ. ನಾವು ಖಂಡಿತ ಅದನ್ನು ಮಾಡಿಯೇ ಬಿಡುವೆವು
(ದೂತರೇ,) ಅವರು ನಿರ್ಲಕ್ಷಿಸಿದರೆ ಹೇಳಿರಿ; ನಾನಂತು ಸಮಾನವಾಗಿ ನಿಮಗೆಲ್ಲಾ ಎಚ್ಚರಿಕೆ ನೀಡಿದ್ದೇನೆ. ನಿಮಗೆ ವಾಗ್ದಾನ ಮಾಡಲಾಗಿರುವ ದಿನವು (ಲೋಕಾಂತ್ಯವು) ಹತ್ತಿರವಿದೆಯೋ ದೂರವಿದೆಯೋ ಎಂಬುದು ನನಗೆ ತಿಳಿಯದು
ಅವರು (ದೂತರು) ಹೇಳಿದರು; ನನ್ನೊಡೆಯಾ, ನೀನು ನ್ಯಾಯದೊಂದಿಗೆ ತೀರ್ಮಾನಿಸಿಬಿಡು. ನಮ್ಮ ಒಡೆಯನು ಪರಮ ದಯಾಳುವಾಗಿದ್ದಾನೆ. ನೀವು ಆಡುವ ಎಲ್ಲ ಮಾತುಗಳ ಕುರಿತಂತೆ ಅವನಿಂದಲೇ ನೆರವನ್ನು ಬೇಡಲಾಗುತ್ತದೆ
ಅಂದು ನೀವು ಕಾಣುವಿರಿ; ಹಾಲುಣಿಸುವ ಪ್ರತಿಯೊಬ್ಬಳು (ತಾಯಿ) ತಾನು ಹಾಳುಣಿಸುತ್ತಿದ್ದುದನ್ನು (ತನ್ನ ಮಗುವನ್ನು) ಮರೆತು ಬಿಡುವಳು ಮತ್ತು ಪ್ರತಿಯೊಬ್ಬ ಗರ್ಭಿಣಿಯು ತನ್ನ ಗರ್ಭವನ್ನು ಬೀಳಿಸುವಳು ಮತ್ತು ನಿಮಗೆ, ಜನರು ಅಮಲಿನಲ್ಲಿರುವಂತೆ ಕಾಣುವರು. ಆದರೆ ಅವರು ಅಮಲಿನಲ್ಲಿರಲಾರರು. ನಿಜವಾಗಿ ಅಲ್ಲಾಹನ ಶಿಕ್ಷೆಯು ಅಷ್ಟು ಕಠೋರವಾಗಿರುವುದು
ಜನರಲ್ಲಿ ಕೆಲವರು ಜ್ಞಾನವೇನೂ ಇಲ್ಲದೆ, ಅಲ್ಲಾಹನ ವಿಷಯದಲ್ಲಿ ಜಗಳಾಡುತ್ತಾರೆ ಮತ್ತು ಪ್ರತಿಯೊಬ್ಬ ವಿದ್ರೋಹಿ ಶೈತಾನನನ್ನು ಅನುಕರಿಸುತ್ತಾರೆ.4. ಅವನ (ಶೈತಾನನ) ಕುರಿತು, ಅವನು ತನ್ನ ಮಿತ್ರರಾಗುವ ಎಲ್ಲರನ್ನೂ ದಾರಿಗೆಡಿಸುವನು ಮತ್ತು ಅವರನ್ನು ನರಕದ ಶಿಕ್ಷೆಯೆಡೆಗೆ ಮುನ್ನಡೆಸುವನು ಎಂದು ವಿಧಿಸಲಾಗಿದೆ