ಅವನೇ, ಈ ಗ್ರಂಥವನ್ನು ನಿಮಗೆ ಇಳಿಸಿಕೊಟ್ಟವನು. ಇದರಲ್ಲಿ ಖಚಿತ ವಚನಗಳಿವೆ – ಅವುಗಳೇ ಈ ಗ್ರಂಥದ ಸಾರ. ಇನ್ನು, ಇದರಲ್ಲಿ ಬಹು ಅರ್ಥದ ವಚನಗಳೂ ಇವೆ. ತಮ್ಮ ಮನಸ್ಸುಗಳಲ್ಲಿ ವಕ್ರತೆ ಉಳ್ಳವರು, ಈ ಪೈಕಿ ಬಹು ಅರ್ಥದ ವಚನಗಳ ಹಿಂದೆ ನಡೆಯುತ್ತಾರೆ. ಅವರು ಈ ಮೂಲಕ ಗೊಂದಲದ ಬೆನ್ನು ಹಿಡಿಯುತ್ತಾರೆ ಮತ್ತು ವಿಕೃತ ವ್ಯಾಖ್ಯಾನಗಳನ್ನು ಅರಸುತ್ತಿರುತ್ತಾರೆ. ನಿಜವಾಗಿ, ಅವುಗಳ ಸರಿಯಾದ ವ್ಯಾಖ್ಯಾನವನ್ನು ಬಲ್ಲವನು ಅಲ್ಲಾಹನ ಹೊರತು ಬೇರಾರೂ ಇಲ್ಲ. ಪಕ್ವವಾದ ಜ್ಞಾನ ಉಳ್ಳವರು ಮಾತ್ರ, ‘‘ನಾವು ಇದನ್ನು ನಂಬಿರುವೆವು, ಇದೆಲ್ಲವೂ ನಮ್ಮೊಡೆಯನ ಕಡೆಯಿಂದಲೇ ಬಂದಿದೆ’’ ಎನ್ನುತ್ತಾರೆ. ನಿಜವಾಗಿ ಬುದ್ಧಿವಂತರ ಹೊರತು ಬೇರಾರೂ ಪಾಠ ಕಲಿಯುವುದಿಲ್ಲ