ಅಲ್ಲಾಹನು ನಿಮ್ಮ ಮಕ್ಕಳ ಕುರಿತು ನಿಮಗೆ ಬೋಧಿಸುತ್ತಿದ್ದಾನೆ; ಒಬ್ಬ ಪುರುಷನಿಗೆ ಇಬ್ಬರು ಸ್ತ್ರೀಯರಷ್ಟು ಪಾಲು. ಇನ್ನು ಸ್ತ್ರೀಯರು (ಉತ್ತರಾಧಿಕಾರಿ ಪುತ್ರಿಯರು) ಇಬ್ಬರಿಗಿಂತ ಹೆಚ್ಚಿದ್ದರೆ, ಅವರಿಗೆ (ಮೃತನ ಸೊತ್ತಿನಲ್ಲಿ) ಮೂರನೇ ಎರಡು ಪಾಲು. ಒಬ್ಬಳೇ ಇದ್ದರೆ ಆಕೆಗೆ ಅರ್ಧ ಪಾಲು. ಅವನಿಗೆ (ಮೃತನಿಗೆ) ಮಕ್ಕಳಿದ್ದರೆ ಅವನ ತಂದೆ ತಾಯಿಯರಲ್ಲಿ ಪ್ರತಿಯೊಬ್ಬರಿಗೆ (ಮೃತನ) ಸೊತ್ತಿನಲ್ಲಿ ಆರನೇ ಒಂದಂಶ. ಆತನಿಗೆ ಮಕ್ಕಳಿಲ್ಲವಾದರೆ ಹಾಗೂ ಅವನ ತಂದೆ ತಾಯಿಯೇ ಅವನ ಉತ್ತರಾಧಿಕಾರಿಗಳಾಗಿದ್ದರೆ ತಾಯಿಗೆ ಮೂರನೇ ಒಂದು ಪಾಲು. ಆತನಿಗೆ ಸಹೋದರರು ಮತ್ತು ಸಹೋದರಿಯರಿದ್ದರೆ ಆತನ ತಾಯಿಗೆ ಆರನೇ ಒಂದು ಪಾಲು. ಇದೆಲ್ಲಾ ಆತನ ‘ವಸಿಯ್ಯತ್’ (ಉಯಿಲು ಅಥವಾ ಉಪದೇಶ) ಅನ್ನು ಅನುಷ್ಠಾನಿಸಿದ ಬಳಿಕ ಹಾಗೂ ಅವನ ಸಾಲವನ್ನು ತೀರಿಸಿದ ಬಳಿಕ. ನಿಮ್ಮ ಹೆತ್ತವರು ಮತ್ತು ನಿಮ್ಮ ಪುತ್ರರು (ಮಕ್ಕಳು) – ಇವರ ಪೈಕಿ ಲಾಭದ ದೃಷ್ಟಿಯಿಂದ ಯಾರು ನಿಮಗೆ ಹೆಚ್ಚು ನಿಕಟರೆಂಬುದು ನಿಮಗೆ ತಿಳಿಯದು. ಇವು ಅಲ್ಲಾಹನು ನಿಶ್ಚಯಿಸಿರುವ ಕಡ್ಡಾಯ ಪಾಲುಗಳು. ಅಲ್ಲಾಹನು ಎಲ್ಲವನ್ನೂ ಅರಿತಿರುವವನು ಮತ್ತು ಯುಕ್ತಿವಂತನಾಗಿದ್ದಾನೆ