ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ನಂಬಿಕೆ ಇರುವವರು ಅಲ್ಲಾಹ್ ಮತ್ತು ಅವನ ದೂತರ ಶತ್ರುಗಳೊಂದಿಗೆ ಸ್ನೇಹ ಬೆಳೆಸುವುದನ್ನು ನೀವೆಂದೂ ಕಾಣಲಾರಿರಿ – ಅವರು, ತಮ್ಮ ಹೆತ್ತವರು ಅಥವಾ ತಮ್ಮ ಪುತ್ರರು ಅಥವಾ ತಮ್ಮ ಸಹೋದರರು ಅಥವಾ ತಮ್ಮ ಬಂಧುಗಳಾಗಿದ್ದರೂ ಸರಿಯೇ. ಅಲ್ಲಾಹನು ಅವರ ಮನಸ್ಸುಗಳಲ್ಲಿ ವಿಶ್ವಾಸದ ಮುದ್ರೆಯೊತ್ತಿ ಬಿಟ್ಟಿರುವನು ಮತ್ತು ಅವನು ತನ್ನ ಕಡೆಯಿಂದ ವಿಶೇಷ ಚೈತನ್ಯವನ್ನೊದಗಿಸಿ ಅವರಿಗೆ ನೆರವಾಗಿರುವನು. ಮತ್ತು ಅವನು ಅವರನ್ನು, ತಳದಲ್ಲಿ ನದಿಗಳು ಹರಿಯುವಂತಹ ಸ್ವರ್ಗ ತೋಟಗಳೊಳಗೆ ಸೇರಿಸುವನು. ಅವರು ಅವುಗಳಲ್ಲಿ ಸದಾಕಾಲ ಇರುವರು. ಅಲ್ಲಾಹನು ಅವರಿಂದ ಸಂತುಷ್ಟನಾಗಿರುವನು ಮತ್ತು ಅವರು ಅವನಿಂದ ಸಂತುಷ್ಟರಾಗಿರುವರು. ಅವರೇ ಅಲ್ಲಾಹನ ಬಳಗದವರು. ನಿಮಗೆ ತಿಳಿದಿರಲಿ, ಅಲ್ಲಾಹನ ಬಳಗದವರೇ ವಿಜಯಿಗಳಾಗುವರು