ಇಬ್ರಾಹೀಮ್ ಹಾಗೂ ಅವರ ಜೊತೆಗಿದ್ದವರಲ್ಲಿ ನಿಮಗೆ ಶ್ರೇಷ್ಠ ಆದರ್ಶವಿದೆ. ‘‘ನಾವು ನಿಮ್ಮಿಂದ ಹಾಗೂ ಅಲ್ಲಾಹನ ಹೊರತು ನೀವು ಪೂಜಿಸುವ ಎಲ್ಲವುಗಳಿಂದ ಸಂಬಂಧ ಕಡಿದು ಕೊಂಡಿರುವೆವು. ಏಕ ಮಾತ್ರನಾದ ಅಲ್ಲಾಹನನ್ನು ನೀವು ನಂಬುವ ತನಕವೂ ನಾವು ನಿಮ್ಮನ್ನು ಧಿಕ್ಕರಿಸುವೆವು ಮತ್ತು ನಮ್ಮ ಹಾಗೂ ನಿಮ್ಮ ನಡುವೆ ಶಾಶ್ವತವಾಗಿ ದ್ವೇಷ ಮತ್ತು ವೈಷಮ್ಯವಿರುವುದು’’ ಎಂದು ಅವರು ತಮ್ಮ ಜನಾಂಗದವರೊಡನೆ ಹೇಳಿದ್ದರು. ಆದರೆ ಇಬ್ರಾಹೀಮರು ತಮ್ಮ ತಂದೆಯೊಡನೆ ಹೇಳಿದ್ದ ಒಂದು ಮಾತು ಇದಕ್ಕೆ ಹೊರತಾಗಿದೆ (ಅದು ನಿಮಗೆ ಆದರ್ಶವಲ್ಲ). ಅವರು ಹೇಳಿದ್ದರು; ‘‘ನಾನು ನಿಮ್ಮ ಕ್ಷಮೆಗಾಗಿ ಖಂಡಿತ ಪ್ರಾರ್ಥಿಸುವೆನು. ಆದರೆ ಅಲ್ಲಾಹನೆದುರು ಮಾತ್ರ ನಿಮಗಾಗಿ ಏನು ಮಾಡಲಿಕ್ಕೂ ನಾನು ಶಕ್ತನಲ್ಲ. ನಮ್ಮೊಡೆಯಾ, ನಾವು ನಿನ್ನಲ್ಲೇ ಭರವಸೆ ಇಟ್ಟಿರುವೆವು. ನಿನ್ನ ಕಡೆಗೇ ಒಲಿಯುತ್ತಿರುವೆವು ಮತ್ತು ನಿನ್ನೆಡೆಗೇ (ನಾವು) ಮರಳ ಬೇಕಾಗಿದೆ’’