Back to Languages

Kannada - Chapter 76 - Al-Insan

Translation by Abdussalam Puthige — Permalink

Verse 1 — Surah Al-Insan 76:1

ಮನುಷ್ಯನು, ತಾನೊಂದು ಪ್ರಸ್ತಾಪ ಯೋಗ್ಯ ವಸ್ತುವೇ ಅಲ್ಲವಾಗಿದ್ದ ಕಾಲವೊಂದನ್ನು ಕಳೆದಿಲ್ಲವೇ

Verse 2 — Surah Al-Insan 76:2

ನಾವು ಮನುಷ್ಯನನ್ನು ಪರೀಕ್ಷಿಸಲಿಕ್ಕಾಗಿ, ಅವನನ್ನು ಮಿಶ್ರಿತ ವೀರ್ಯದಿಂದ ಸೃಷ್ಟಿಸಿರುವೆವು. ಮತ್ತು ನಾವು ಅವನನ್ನು ಕೇಳ ಬಲ್ಲವನಾಗಿಯೂ ನೋಡ ಬಲ್ಲವನಾಗಿಯೂ ಮಾಡಿರುವೆವು

Verse 3 — Surah Al-Insan 76:3

ನಾವೇ ಅವನಿಗೆ ದಾರಿಯನ್ನು ತೋರಿಸಿದೆವು. ಇನ್ನವನು ಕೃತಜ್ಞನಾಗಲಿ ಅಥವಾ ಕೃತಘ್ನನಾಗಲಿ

Verse 4 — Surah Al-Insan 76:4

ನಾವು ಧಿಕ್ಕಾರಿಗಳಿಗಾಗಿ ಸರಪಣಿಗಳನ್ನೂ ನೊಗಗಳನ್ನೂ ಭುಗಿಲೇಳುವ ಬೆಂಕಿಯನ್ನೂ ಸಿದ್ಧಪಡಿಸಿಟ್ಟಿರುವೆವು

Verse 5 — Surah Al-Insan 76:5

ಸಜ್ಜನರು (ಸ್ವರ್ಗದಲ್ಲಿ) ಪಾನ ಪಾತ್ರೆಯಿಂದ ಕರ್ಪೂರ ಮಿಶ್ರಿತ ಪಾನೀಯವೊಂದನ್ನು ಸೇವಿಸುತ್ತಿರುವರು

Verse 6 — Surah Al-Insan 76:6

ಆ ಚಿಲುಮೆಯಿಂದ ಅಲ್ಲಾಹನ ದಾಸರು ಕುಡಿಯುವರು ಮತ್ತು ಅದರಿಂದ ಹಲವು ಕಾಲುವೆಗಳನ್ನು ಹೊರಡಿಸುವರು

Verse 7 — Surah Al-Insan 76:7

(ಇಹಲೋಕದಲ್ಲಿ) ಅವರು, ತಮ್ಮ ಹರಕೆಯನ್ನು ಈಡೇರಿಸುತ್ತಾರೆ. ಮತ್ತು ಸರ್ವವ್ಯಾಪಿ ಸಂಕಟದ ದಿನವನ್ನು ಅಂಜುತ್ತಿರುತ್ತಾರೆ

Verse 8 — Surah Al-Insan 76:8

ಅವರು ಅವನ (ಅಲ್ಲಾಹನ) ಮೆಚ್ಚುಗೆಗಾಗಿ ನಿರ್ಗತಿಕರಿಗೆ, ಅನಾಥರಿಗೆ ಮತ್ತು ಕೈದಿಗಳಿಗೆ ಉಣ ಬಡಿಸುತ್ತಾರೆ

Verse 9 — Surah Al-Insan 76:9

(ಮತ್ತು ಅವರು ಹೇಳುತ್ತಾರೆ;) ‘‘ನಾವು ಕೇವಲ ಅಲ್ಲಾಹನ ಮೆಚ್ಚುಗೆಗಾಗಿ ನಿಮಗೆ ಉಣಿಸುತ್ತಿದ್ದೇವೆ. ನಿಮ್ಮಿಂದ ನಾವು ಯಾವುದೇ ಪ್ರತಿಫಲವನ್ನಾಗಲಿ ಕೃತಜ್ಞತೆಯನ್ನಾಗಲಿ ಬಯಸುವುದಿಲ್ಲ’’

Verse 10 — Surah Al-Insan 76:10

‘‘ನಮಗೆ ನಮ್ಮೊಡೆಯನ ಕಡೆಯಿಂದ ಬರಲಿರುವ ಕರಾಳ ಹಾಗೂ ಕಠೋರ (ಪುನರುತ್ಥಾನ) ದಿನದ ಭಯವಿದೆ’’

Verse 11 — Surah Al-Insan 76:11

ಅಲ್ಲಾಹನು ಅವರನ್ನು ಆ ದಿನದ ಹಾನಿಯಿಂದ ರಕ್ಷಿಸುವನು. ಮತ್ತು ಅವರಿಗೆ ಉಲ್ಲಾಸ ಹಾಗೂ ಸಂತೋಷವನ್ನು ನೀಡುವನು

Verse 12 — Surah Al-Insan 76:12

ಅವರ ಸಹನೆಯ ಫಲವಾಗಿ ಅವರಿಗೆ ಸ್ವರ್ಗ ಹಾಗೂ ರೇಶ್ಮೆಯ ಉಡುಗೆಯನ್ನು ದಯಪಾಲಿಸುವನು

Verse 13 — Surah Al-Insan 76:13

ಅಲ್ಲಿ ಅವರು ಆಸನಗಳ ಮೇಲೆ ದಿಂಬುಗಳಿಗೆ ಒರಗಿ ಕೊಂಡಿರುವರು. ಅಲ್ಲಿ ಅವರು ತೀಕ್ಷ್ಣ ಬಿಸಿಲನ್ನಾಗಲಿ ತೀವ್ರ ಚಳಿಯನ್ನಾಗಲೀ ಕಾಣಲಾರರು

Verse 14 — Surah Al-Insan 76:14

ಅದರ (ಸ್ವರ್ಗ ತೋಟದ) ನೆರಳು ಅವರನ್ನು ಆವರಿಸಿರುವುದು. ಅದರಲ್ಲಿನ ಹಣ್ಣಿನ ಗೊಂಚಲುಗಳು ಅವರಿಗೆ ಎಟುಕುತ್ತಿರುವವು

Verse 15 — Surah Al-Insan 76:15

ಬೆಳ್ಳಿಯ ಪಾತ್ರೆಗಳನ್ನೂ ಶುಭ್ರವಾದ ಗಾಜಿನ ಪಾನ ಪಾತ್ರೆಗಳನ್ನೂ ಅವರ ಸುತ್ತ ಒಯ್ಯಲಾಗುವುದು

Verse 16 — Surah Al-Insan 76:16

ಅದು ಕಲಾತ್ಮಕವಾಗಿ ಅಲಂಕರಿಸಿದ ಬೆಳ್ಳಿಯ ಗಾಜಾಗಿರುವುದು ಮತ್ತು ಅವುಗಳನ್ನು ತುಂಬುವವರು ಸರಿಯಾದ ಪ್ರಮಾಣದಲ್ಲಿ ತುಂಬಿರುವರು

Verse 17 — Surah Al-Insan 76:17

ಅಲ್ಲಿ ಅವರಿಗೆ ಶುಂಠಿಯ ಮಿಶ್ರಣವಿರುವ ಪಾನೀಯಗಳನ್ನು ಕುಡಿಸಲಾಗುವುದು

Verse 18 — Surah Al-Insan 76:18

ಅಲ್ಲಿ ಸಲ್ ಸಬೀಲ್ ಎಂಬ ಹೆಸರಿನ ಒಂದು ಚಿಲುಮೆ ಇರುವುದು

Verse 19 — Surah Al-Insan 76:19

ಸದಾ ಬಾಲಕರಾಗಿರುವವರು ಅಲ್ಲಿ ಸಂಚರಿಸುತ್ತಿರುವರು. ನೀವು ಅವರನ್ನು ಕಂಡರೆ, ಅವರು ಚದುರಿದ ಮುತ್ತುಗಳೆಂದು ಭಾವಿಸುವಿರಿ

Verse 20 — Surah Al-Insan 76:20

ಅಲ್ಲಿ ನೀವು ಎಲ್ಲಿ ನೋಡಿದರೂ ಧಾರಾಳ ಅನುಗ್ರಹಗಳನ್ನು ಮತ್ತು ಒಂದು ಬೃಹತ್ ಸಾಮ್ರಾಜ್ಯವನ್ನೇ ಕಾಣುವಿರಿ

Verse 21 — Surah Al-Insan 76:21

ಅವರ ಮೇಲುಡುಪು ನುಣ್ಣಗೆಯ ಹಸಿರು ರೇಷ್ಮೆ ಹಾಗೂ ಉಣ್ಣೆಯದ್ದಾಗಿರುವುದು ಮತ್ತು ಅವರಿಗೆ ಬೆಳ್ಳಿಯ ಕಡಗಗಳನ್ನು ತೊಡಿಸಲಾಗುವುದು ಮತ್ತು ಅವರ ಒಡೆಯನು ಅವರಿಗೆ ಒಂದು ನಿರ್ಮಲ ಪಾನೀಯವನ್ನು ಕುಡಿಸುವನು

Verse 22 — Surah Al-Insan 76:22

‘‘ಇದು ನಿಮ್ಮ ಪ್ರತಿಫಲ. ನಿಮ್ಮ ಶ್ರಮವು ಸ್ವೀಕೃತವಾಗಿದೆ’’ (ಎಂದು ಅವರೊಡನೆ ಹೇಳಲಾಗುವುದು)

Verse 23 — Surah Al-Insan 76:23

ದೂತರೇ, ನಾವು ಈ ಕುರ್‌ಆನನ್ನು ಹಂತ ಹಂತವಾಗಿ ನಿಮಗೆ ಇಳಿಸಿ ಕೊಟ್ಟಿರುವೆವು

Verse 24 — Surah Al-Insan 76:24

ನೀವು ನಿಮ್ಮೊಡೆಯನಿಗಾಗಿ ಸಹನಶೀಲರಾಗಿರಿ ಮತ್ತು ಅವರ (ಧಿಕ್ಕಾರಿಗಳ) ಪೈಕಿ ಯಾವುದೇ ಪಾಪಿಯ ಅಥವಾ ಕೃತಘ್ನನ ಮಾತನ್ನು ಅನುಸರಿಸಬೇಡಿರಿ

Verse 25 — Surah Al-Insan 76:25

ಸಂಜೆ ಮತ್ತು ಮುಂಜಾನೆಯ ವೇಳೆ ನೀವು ನಿಮ್ಮ ಒಡೆಯನ ನಾಮ ಸ್ಮರಣೆ ಮಾಡಿರಿ

Verse 26 — Surah Al-Insan 76:26

ಮತ್ತು ಇರುಳಲ್ಲಿ ಅವನಿಗೆ ಸಾಷ್ಟಾಂಗವೆರಗಿರಿ ಹಾಗೂ ಇರುಳಿನ ಧೀರ್ಘ ಭಾಗದಲ್ಲಿ ಅವನ ಪಾವಿತ್ರವನ್ನು ಜಪಿಸಿರಿ

Verse 27 — Surah Al-Insan 76:27

ಅವರು ಬೇಗನೆ ಸಿಗುವುದನ್ನು (ಇಹಲೋಕವನ್ನು) ಪ್ರೀತಿಸುತ್ತಾರೆ ಮತ್ತು ತಮ್ಮ ಮುಂದಿರುವ (ಲೋಕಾಂತ್ಯದ) ಮಹಾ ದಿನವನ್ನು ಕಡೆಗಣಿಸಿ ಬಿಡುತ್ತಾರೆ

Verse 28 — Surah Al-Insan 76:28

ನಾವೇ ಅವರನ್ನು ಸೃಷ್ಟಿಸಿರುವೆವು ಮತ್ತು ಅವರ ಶರೀರದ ಗಂಟುಗಳನ್ನು ಬಲ ಪಡಿಸಿರುವೆವು ಮತ್ತು ನಾವು ಬಯಸಿದರೆ ಅವರ ಬದಲಿಗೆ ಅವರಂತಹ ಇತರರನ್ನು ತರಬಲ್ಲೆವು

Verse 29 — Surah Al-Insan 76:29

ಇದೊಂದು ಉಪದೇಶವಾಗಿದೆ. ಇಷ್ಟ ಉಳ್ಳವನು ತನ್ನ ಒಡೆಯನ ಕಡೆಗಿರುವ ದಾರಿಯನ್ನು ಅನುಸರಿಸಲಿ

Verse 30 — Surah Al-Insan 76:30

ಅಲ್ಲಾಹನು ಇಚ್ಛಿಸುವ ತನಕ ನಿಮ್ಮ ಯಾವ ಇಚ್ಛೆಯೂ ನಡೆಯದು. ಅಲ್ಲಾಹನು ಖಂಡಿತ ಎಲ್ಲವನ್ನೂ ಬಲ್ಲವನೂ ಯುಕ್ತಿವಂತನೂ ಆಗಿರುತ್ತಾನೆ

Verse 31 — Surah Al-Insan 76:31

ಅವನು ತಾನಿಚ್ಛಿಸಿದವರನ್ನು ತನ್ನ ಅನುಗ್ರಹದೊಳಗೆ ಸೇರಿಸಿಕೊಳ್ಳುತ್ತಾನೆ ಮತ್ತು ಅಕ್ರಮಿಗಳಿಗಾಗಿ ಅವನು ಕಠಿಣ ಶಿಕ್ಷೆಯನ್ನು ಸಿದ್ದವಾಗಿಟ್ಟಿದ್ದಾನೆ